ಶಿವಮೊಗ್ಗ ನಗರದ ಆಲ್ಕೊಳದಲ್ಲಿರುವ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ(ರಿ) ಎಸ್.ಎಂ.ಎಸ್.ಎಸ್.ಎಸ್. ಸಂಸ್ಥೆಯ ವತಿಯಿಂದ ಕೋವಿಡ್ ಸಂದಿಗ್ಧ ಪರಿಸ್ಥಿತಿಯಿಂದ ಹಾಗೂ ದುರ್ಘಟನೆಯಿಂದ, ಪೋಷಕರನ್ನು ಕಳೆದುಕೊಂಡ ಮಕ್ಕಳೊಂದಿಗೆ ಅರ್ಥಾತ್ ಮಿನುಗುತಾರೆಗಳೊಂದಿಗೆ ಕ್ರಿಸ್ಮಸ್" ಸಂಭ್ರ‍್ರಮಾಚರಣೆಯು ದಿನಾಂಕ 18-12-2024 ಬುಧವಾರದಂದು ಬೆಳಿಗ್ಗೆ 10 ಗಂಟೆಗೆ ಅಗಮುಡಿ ಸಮುದಾಯ ಭವನದಲ್ಲಿ ನಡೆಯಿತು.
ಈ ಕ್ರಿಸ್ಮಸ್ ಸಂಭ್ರಮಾಚರಣೆಯಲ್ಲಿ ಉದ್ಘಾಟಕರಾಗಿ ಶ್ರೀ ಅಬ್ದುಲ್ ಲತೀಫ್ ಸಅದಿ ಮಾತನಾಡಿ, ನೊಂದ ಮನಸ್ಸಿನ ಮಕ್ಕಳನ್ನು ಸಂಘಟಿಸಿ, ಸಂತೋಷವನ್ನು ಹಂಚಿಕೊಳ್ಳುವ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಹಬ್ಬವೇ ಕ್ರಿಸ್ಮಸ್. ಕುಟುಂಬದಲ್ಲಿ ಆಧಾರ ಸ್ತಂಭವನ್ನು ಕಳೆದುಕೊಂಡ ಮಿನುಗುತಾರೆಗಳಿಗೆ ಸಾಂತ್ವಾನ ನೀಡಿ, ತಮ್ಮ ಜೀವನದಲ್ಲಿ ಭರವಸೆ ಕಳೆದುಕೊಂಡ ಮಕ್ಕಳಲ್ಲಿ ಭರವಸೆಯನ್ನು ಮೂಡಿಸುವ ಸಂಸ್ಥೆಯ ಮಹಾಕಾರ್ಯವನ್ನು ಶ್ಲಾಘಿಸಿದರು. ಯಾವುದೇ ಧರ್ಮದವರಾಗಿರಲಿ ನೊಂದ ಮನಸ್ಸನ್ನು ಬೇಸರ ಪಡಿಸದೇ ಮಕ್ಕಳಿಗೆ ಸಂತೋಷ, ನಲಿವು ಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ಮಿನುಗುತಾರೆಗಳಿಗೆ ಮೂಲಭೂತ ಅವಕಾಶ, ಶಿಕ್ಷಣ ಕಲ್ಪಿಸಿಕೊಡುವುದು ಮತ್ತು ಸಮಾಜದಲ್ಲಿ ಜವಾಬ್ದಾರಿ ವ್ಯಕ್ತಿಗಳನ್ನಾಗಿ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಹಲವಾರು ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಕೈಜೋಡಿಸುತ್ತಿರುವುದು ಶ್ಲಾಘನೀಯವಾಗಿದೆ. ಇಂತಹ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಗೆ ಅಭಿನಂದಿಸಿ, ಇದೊಂದು ಕ್ರಿಯಾಶೀಲ ಹಾಗೂ ಮಹತ್ವಪೂರ್ಣ ಕಾರ್ಯವಾಗಿದೆ ಎಂದರು.
ಈ ಸಂಭ್ರಮಾಚರಣೆಯ ದಿವ್ಯ ಸಾನಿಧ್ಯವನ್ನು ವಹಿಸಿರುವ ಸಂತೇಕಡೂರಿನ ಪ್ರಭುದೇವ ಜ್ಞಾನಕೇಂದ್ರದ, ಪೂಜ್ಯಶ್ರೀ ಬಸವ ನವಲಿಂಗ ಶರಣರು, ಮಾತನಾಡಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಮನೆಯ ಪರಿವಾರದಂತೆ ಎಲ್ಲಾ ವರ್ಗದ ಮಕ್ಕಳನ್ನು ಜೊತೆ ಸೇರಿಸಿ ವಿಶ್ವದ ಹಬ್ಬವಾಗಿ ಆಚರಣೆ ಮಾಡುತ್ತಿರುವುದು ತುಂಬಾ ಸಂತೋಷದಾಯಕವಾಗಿದೆ. ಎಲ್ಲಾ ಜಾತಿ ಧರ್ಮ, ಸಂಸ್ಕೃತಿಯನ್ನು ಒಟ್ಟಿಗೆ ಸೇರಿಸಿ ಜಗತ್ತಿನಲ್ಲಿ ಮಾನವೀಯತೆಯನ್ನು ತೋರಿಸಿದ ಮದರ್ ತೆರೇಸಾರವರಿಗೆ ಅಭಿನಂದಿಸುತ್ತಾ, ವಿಶ್ವದ ಎಲ್ಲಾ ಮಕ್ಕಳು ನಮ್ಮ ಮಕ್ಕಳು ಎಂದು ತಿಳಿದು ವಿಚಾರವಂತರಾಗಬೇಕು. ಇಂದಿನ ಕಾರ್ಯಕ್ರಮ ಪ್ರತ್ಯಕ್ಷ ಸಾಕ್ಷಾತ್ಕಾರದೊಂದಿಗೆ ಅನುಭಾವಗಳನ್ನು ಕಾಣುತ್ತೇವೆ. ಯಾವುದೇ ಧರ್ಮವಾಗಲಿ ಶಾಂತಿ, ಪ್ರೀತಿ, ನ್ಯಾಯ ಸಮಾನತೆಯನ್ನು ತೋರಿಸುವ ಮಕ್ಕಳಲ್ಲಿನ ಲವಲವಿಕೆ ಈ ಕಾರ್ಯಕ್ರಮಕ್ಕೆ ಆದರ್ಶವಾಗಿದೆ. ಈ ಕಾರ್ಯಕ್ರಮವು ಶಿಸ್ತು ಮತ್ತು ವ್ಯವಸ್ಥಿತವಾಗಿದೆ. ಪ್ರತಿಯೊಂದು ಆತ್ಮವು ಮೂಲಭೂತ ಆಧಾರವಾಗಿ ಆತ್ಮೀಯತೆ, ಮಾನವೀಯತೆ, ಸಹಾನುಭೂತಿ, ಸಮಾನತೆ, ದಿವ್ಯತ್ವವನ್ನು ಕಾಣುವ ಮೂಲಕ ದೇವರ ಅನುಗ್ರಹ ಸಿಗಲಿ, ಮಕ್ಕಳು ವಿಶ್ವ ಕುಟುಂಬವಾಗಲಿ ಎಂದು ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಧರ್ಮಕ್ಷೇತ್ರದ ಗುರುಶ್ರೇಷ್ಟರು, ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಪವಿತ್ರ ಹೃದಯ ಪ್ರಧಾನಾಲಯದ ಧರ್ಮಗುರುಗಳಾಗಿರುವ ವಂ.ಫಾ. ಸ್ಟಾö್ಯನಿ ಡಿ'ಸೋಜ ಇವರು ಮಾತನಾಡಿ ಯಾವುದೇ ಸಾಧನೆ ಮಾಡಬೇಕಾದರೆ ನಮ್ಮಲ್ಲಿ ಆತ್ಮವಿಶ್ವಾಸ, ಶ್ರದ್ದೆ, ಛಲ, ಧೈರ್ಯದಿಂದ ಕಾರ್ಯೋನ್ಮುಖರಾದಲ್ಲಿ ಯಶಸ್ಸು ಸಿಗುತ್ತದೆ ಎಂದರು.
ಈ ಕ್ರಿಸ್ಮಸ್ ಸಂಭ್ರಮಾಚರಣೆಯಲ್ಲಿ ಎಸ್.ಎಂ.ಎಸ್.ಎಸ್.ಎಸ್. ಸಂಸ್ಥೆಯ ನಿರ್ದೇಶಕರಾದ ವಂ.ಫಾ. ಪಿಯುಸ್ ಡಿ'ಸೋಜರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ 290 ಮಿನುಗುತಾರೆ ಮಕ್ಕಳಿಗೆ ಉಡುಗೊರೆ ನೀಡಲಾಯಿತು. ಕಾರ್ಯಕ್ರಮವನ್ನು ಶ್ರೀಮತಿ ಸವಿತ ಎಂ ನಿರೂಪಿಸಿದರು. ಶ್ರೀಮತಿ ಶ್ರೀದೇವಿ ಸರ್ವರನ್ನು ಸ್ವಾಗತಿಸಿ ಕೊನೆಯದಾಗಿ ಶ್ರೀಮತಿ ಲಿಲ್ಲಿ ಲೋಪಿಸ್ ವಂದಿಸಿದರು.