ಶಿವಮೊಗ್ಗ ನಗರದ ಆಲ್ಕೊಳದಲ್ಲಿರುವ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ(ರಿ)ಯ ಪ್ರೇರಣೆಯಲ್ಲಿ ದಿನಾಂಕ:18-03-2025 ರ ಮಂಗಳವಾರದಂದು ಸಾಗರ ತಾಲ್ಲೂಕಿನ ಫಾತಿಮಾಪುರ ಚರ್ಚ್ ಆವರಣದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಸ್ವಾವಲಂಬನೆ, ಶಿಕ್ಷಣ, ಸಮಾನತೆ, ಸಹಕಾರ, ಘನತೆ, ಸಂರಕ್ಷಣೆ, ಸಂಘಟನೆ, ಸಹಬಾಳ್ವೆ, ಗೌರವ ಮುಂತಾದ ಪದಗುಚ್ಛಗಳನ್ನು ಪ್ರತಿಷ್ಠಾಪಿಸುವುದರ ಮೂಲಕ ಉದ್ಘಾಟಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ, ಅಮಿನಾ ಮದೀಹಾ ಇವರು ಮಹಿಳೆಯರ ಮನೋಭಾವ ಮತ್ತು ಕರ್ತವ್ಯ ನಿಷ್ಠೆ ಕುರಿತು ಮಾತನಾಡಿ ಮಹಿಳೆಯರಲ್ಲಿ ಬರುವ ಕ್ಯಾನ್ಸರ್ ಕಾಯಿಲೆಯ ಕಾರಣಗಳು, ಗುಣಲಕ್ಷಣಗಳು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ಮಹಿಳೆಯರು ಚಿಕಿತ್ಸೆ ಪಡೆಯಬೇಕಾದರೆ ಸರ್ಕಾರದಿಂದ ಯಾವ ಕಾರ್ಯಕ್ರಮಗಳಿವೆ ಮತ್ತು ಸೌಲಭ್ಯಗಳಿವೆ ಎಂಬ ಬಗ್ಗೆ ಮಾಹಿತಿ ನೀಡಿ ಎಲ್ಲರೂ ಈ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹೊಂದಿ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದು ಕರೆ ನೀಡಿದರು. ತದನಂತರ ಎಸ್.ಎಮ್.ಎಸ್.ಎಸ್.ಎಸ್. ಸಂಸ್ಥೆಯ ನಿರ್ದೇಶಕರಾದ ಫಾದರ್ ಪಿಯುಸ್ ಡಿಸೋಜರವರು ಮಾತನಾಡಿ, ಸಂಸ್ಥೆಯ ಮಹಿಳಾ ಪರವಾದ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಎಲ್ಲಾ ಮಹಿಳೆಯರು ಸಂಸ್ಥೆಯ ಸಂಘಗಳ ಸದಸ್ಯರಾಗಿ ಆರ್ಥಿಕ ವ್ಯವಹಾರಗಳನ್ನು ನಡೆಸುವುದರ ಜೊತೆಗೆ ಸಂಸ್ಥೆಯು ಆಯೋಜಿಸುವ ವಿವಿಧ ತರಬೇತಿಗಳ ಸದುಪಯೋಗವನ್ನು ಪಡೆದು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ದಿ ಹೊಂದಬೇಕೆoದು ತಿಳಿಸಿದರು.
ಜೋಗ ಧರ್ಮಕೇಂದ್ರ ಗುರುಗಳಾದ ಫಾದರ್ ಸಾಲ್ವದೊರ್ ರೊಡ್ರಿಗಸ್‌ರವರು ಮಾತನಾಡಿ ಮಹಿಳೆಯರ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉನ್ನತ ಸಾಧನೆ ಮಾಡಿದ ಮಹಿಳೆಯರ ಆದರ್ಶವನ್ನು ಪಾಲಿಸಿ ಎಲ್ಲಾ ಮಹಿಳೆಯರು ಆತ್ಮವಿಶ್ವಾಸದಿಂದ ಸಾಧನೆಗಳನ್ನು ಮಾಡಬೇಕೆಂದು ತಿಳಿಸಿದರು. ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಸ್ಟರ್ ಶ್ವೇತಾರವರು ಮಾತನಾಡಿ ಮಹಿಳೆಯರು ಶಕ್ತಿಯುಳ್ಳವರು, ಆತ್ಮವಿಶ್ವಾಸದಿಂದ ತಮ್ಮಲ್ಲಿರುವ ಶಕ್ತಿಯನ್ನು ಕುಟುಂಬದ, ಸಮಾಜದ ಅಭಿವೃದ್ದಿಗೆ ಬಳಸಬೇಕೆಂದು ತಿಳಿಸಿದರು. ಮಹಿಳೆಯರು ಯಾವಾಗಲೂ ಒಗ್ಗಟ್ಟಿನಿಂದ ಇರಬೇಕು. ಹಾಗಿದ್ದರೆ ಮಾತ್ರ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ರಾಜುರವರು ಹಾಗೂ ಉಪಾಧ್ಯಕ್ಷರಾದ ಜಯಲಕ್ಷ್ಮಿರವರು ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದರು.
ಕಾರ್ಯಕ್ರಮದ ನಿರೂಪಣೆಯನ್ನು ಮರ್ಸಿರವರು ನೆರವೇರಿಸಿದರು. ಡೊರಿನ ಮತ್ತು ತಂಡದವರಿoದ ಪ್ರಾರ್ಥನೆ ಮಾಡಲಾಯಿತು. ಮಗ್ದಲಿನ್‌ರವರು ಸ್ವಾಗತಿಸಿ, ಸುಮರವರು ಎಲ್ಲರನ್ನು ವಂದಿಸಿದರು.
ಹೊಳಲೂರು ಸ್ತ್ರೀ ಬಂಧು ಒಕ್ಕೂಟದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಜಾಥ ಕಾರ್ಯಕ್ರಮ.
ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ(ರಿ) ಶಿವಮೊಗ್ಗ ಪ್ರೇರಣೆಯಲ್ಲಿ ಸ್ತ್ರೀಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ, ಹೊಳಲೂರು ಇವರ ವತಿಯಿಂದ ಹೊಳಲೂರಿನ ಶ್ರೀ ಮೈಲಾರೇಶ್ವರ ದತ್ತ ಶ್ರೀಬಾಲಾಶ್ರಮ ಸಮುದಾಯ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಒಕ್ಕೂಟದ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಜಾಥಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ತ್ರೀಬಂಧು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಮೇಘನಾರವರು ವಹಿಸಿದ್ದರು. ಶ್ರೀಮತಿ ಭಾಗ್ಯ ಪ್ರಕಾಶ್, ಅಧ್ಯಕ್ಷರು, ಗ್ರಾ.ಪಂ. ಸೂಗೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಸ್.ಎಮ್.ಎಸ್.ಎಸ್. ಸಂಸ್ಥೆಯ ನಿರ್ದೇಶಕರಾದ ಫಾದರ್ ಪಿಯುಸ್ ಡಿಸೋಜ ರವರು ಮತ್ತು ಶ್ರೀಮತಿ ರಮ್ಯಾ ಮಧುಗೌಡ, ಗ್ರಾ.ಪಂ. ಅಧ್ಯಕ್ಷರು, ಹೊಳಲೂರು ಇವರು ಆಗಮಿಸಿದ್ದರು. ಶ್ರೀಯುತ ಎಂ. ಕೃಷ್ಣ, ಕಾರ್ಮಿಕ ನಿರೀಕ್ಷಕರು, ಶಿವಮೊಗ್ಗ ಹಾಗೂ ಶ್ರೀಮತಿ ನೀಲಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಖಿ ಒನ್ ಸೆಂಟರ್ನ ವಕೀಲರು, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
ಸಂಸ್ಥೆಯ ನಿರ್ದೇಶಕರಾದ ಫಾದರ್ ಪಿಯುಸ್ ಡಿಸೋಜ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಮಹಿಳಾ ದಿನಾಚರಣೆಯ ಆಚರಣೆಯ ಹಿಂದಿನ ಉದ್ದೇಶ ಮತ್ತು ಮಹತ್ವವನ್ನು ಕುರಿತು ತಿಳಿಸಿದರು. ಮಹಿಳೆಯರು ಪುರುಷರ ದಿನವನ್ನು ಆಚರಿಸಬೇಕು, ಅಂತೆಯೇ ಪುರುಷರು ಮಹಿಳೆಯರ ದಿನವನ್ನು ಆಚರಿಸುವಂತೆ ಮುಂದಿನ ದಿನಗಳಲ್ಲಿ ಚಿಂತಿಸಿ ಕಾರ್ಯರೂಪಕ್ಕೆ ತರಬೇಕು ಎಂದು ಪ್ರೇರಣಾ ನುಡಿಯನ್ನು ನುಡಿದರು.
ಶ್ರೀಯುತ ಎಂ. ಕೃಷ್ಣ, ಕಾರ್ಮಿಕ ನಿರೀಕ್ಷಕರು, ಶಿವಮೊಗ್ಗ ಇವರು ಕಟ್ಟಡ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ, ಅರ್ಹ ಫಲಾನುಭವಿಗಳು ಪೂರಕ ದಾಖಲೆಗಳೊಂದಿಗೆ ಇಲಾಖೆಗಳಿಗೆ ಭೇಟಿ ನೀಡಿದಾಗ ಸೂಕ್ತ ಸಮಯದಲ್ಲಿ ಕಾರ್ಡ್ ಸೌಲಭ್ಯ ದೊರಕಿಸಿಕೊಡುವುದಾಗಿ ಮಾಹಿತಿ ನೀಡಿದರು.
ಶ್ರೀಮತಿ ನೀಲಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಖಿ ಒನ್ ಸೆಂಟರ್ನ ವಕೀಲರು ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಮತ್ತು ಮಕ್ಕಳು ಈ ದೌರ್ಜನ್ಯದಲ್ಲಿ ಸಿಲುಕಿ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಮತ್ತು ಕುಟುಂಬಗಳು ಮಕ್ಕಳ ಮೇಲೆ ಹೆಚ್ಚು ಗಮನ ಹರಿಸುವಂತೆ ಹಾಗೂ ದೌರ್ಜನ್ಯಕ್ಕೆ ಒಳಗಾದಾಗ ಸೂಕ್ತ ಸಮಯದಲ್ಲಿ ಕಾನೂನಿನ ನೆರವನ್ನು ಪಡೆದು ಸಮಸ್ಯೆಯಿಂದ ಹೊರಬರುವ ಬಗ್ಗೆ ಉತ್ತಮವಾಗಿ ಅರಿವು ನೀಡಿದರು.
ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಕಾರ್ಯಕ್ಷೇತ್ರದಲ್ಲಿ ಶ್ರೀಮತಿ ರುದ್ರಮ್ಮರವರು ಸುಮಾರು 150ಕ್ಕಿಂತ ಹೆಚ್ಚು ಮಹಿಳೆಯರಿಗೆ ಪ್ರಸೂತಿ ಮಾಡಿಸುವ ಮೂಲಕ ಅನೇಕ ಜೀವಗಳನ್ನು ಉಳಿಸಿರುವ ಹೆಮ್ಮೆಗೆ ಭಾಜನರಾಗಿದ್ದಾರೆ. ಇವರನ್ನು ಗುರುತಿಸಿ ಒಕ್ಕೂಟದಿಂದ ಸನ್ಮಾನಿಸಲಾಯಿತು. ಒಕ್ಕೂಟದ ಎಲ್ಲಾ ಸದಸ್ಯರು ಪ್ರೀತಿಪೂರ್ವಕವಾಗಿ ಒಂದೇ ಕುಟುಂಬ ಎಂಬ ಭಾವನೆಯೊಂದಿಗೆ ತಮ್ಮ ಒಕ್ಕೂಟದ ಸದಸ್ಯರಾದ ಶ್ರೀಮತಿ ಸ್ನೇಹಾರವರಿಗೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದರು.
ಒಕ್ಕೂಟ ಆರಂಭವಾಗಿ 10 ವರ್ಷಗಳು ಪೂರ್ಣಗೊಂಡಿದ್ದು, ಇಲ್ಲಿಯವರೆಗೆ ಶ್ರಮಿಸಿದ ಎಲ್ಲಾ ಅಧ್ಯಕ್ಷರುಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಒಂದು ವರ್ಷ ನಿರಂತರವಾಗಿ ಒಕ್ಕೂಟದ ಸಭೆಗೆ ಗೈರುಹಾಜರಾಗದೆ ಸೇವೆ ಸಲ್ಲಿಸಿದ ಖುಷಿ ಸಂಘದ ಶ್ರೀಮತಿ ಮೇನಕಾರವರಿಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ಎಂಎಸ್ಎಸ್ ಸಂಸ್ಥೆಯ ಸಂಯೋಜಕರಾದ ಶ್ರೀಮತಿ ಪ್ರಮೀಳಾ, ಕಾರ್ಯಕರ್ತರಾದ ಮೇರಿ ಸ್ಟೆಲ್ಲಾ, ಒಕ್ಕೂಟದ ಪ್ರತಿನಿಧಿಗಳು, ಪದಾಧಿಕಾರಿಗಳು ಮತ್ತು ಸಂಘಗಳ ಸ್ವಯಂ ಸೇವಕರು ಹಾಜರಿದ್ದರು.