ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ(ರಿ) ಶಿವಮೊಗ್ಗ ಪ್ರೇರಣೆಯಲ್ಲಿ ಸ್ತ್ರೀಬಂಧು ಸ್ವ ಸಹಾಯ ಸಂಘಗಳ ಒಕ್ಕೂಟಗಳು ನ್ಯಾಮತಿ ಮತ್ತು ಗಂಜೀನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ನ್ಯಾಮತಿಯ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ರೋಗಿಗಳ ಜೊತೆಗೆ ಇರುವ ಸಹಾಯಕರಿಗೆ ಮತ್ತು ಬಡವರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸಂಸ್ಥೆಯ ಚೈತನ್ಯ ಅನ್ನ ಕಾರ್ಯಕ್ರಮದಡಿಯಲ್ಲಿ ಅನ್ನ ಸಂತರ್ಪಣೆ ಮೂಲಕ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ನ್ಯಾಮತಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಮೆಣಸಿನಕಾಯಿ, ಹೊನ್ನಾಳಿಯ ಯೇಸು ರಕ್ಷಕ ದೇವಾಲಯದ ನಿರ್ದೇಶಕರು ಮತ್ತು ಧರ್ಮ ಗುರುಗಳಾದ ಫಾದರ್ ಮ್ಯಾಥ್ಯೂ, ಮುಸ್ಲಿಂ ಧರ್ಮ ಕೇಂದ್ರದ ಗುರುಗಳು ಮತ್ತು ಮೌಲ್ವಿಗಳಾದ ನಯಿಂ ರಜಾ಼ ಹಾಗೂ ಹಿಂದು ಧರ್ಮದ ಗುರುಗಳಾದ ಜಯಲಿಂಗ ಸ್ವಾಮೀಜಿಯವರು ಊಟ ವಿತರಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಬಡವರಿಗೆ, ಹಸಿದವರಿಗೆ ಸ್ವ ಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಇದೊಂದು ಉತ್ತಮ ಸೇವಾ ಕಾರ್ಯಕ್ರಮವಾಗಿರುವುದನ್ನು ಶ್ಲಾಘಿಸಿದರು.
ಸಂಸ್ಥೆಯ ನಿರ್ದೇಶಕರಾದ ಫಾದರ್ ಪಿಯುಸ್ ಡಿಸೋಜ ಅವರು ಈ ವಿನೂತನ ಕಾರ್ಯಕ್ರಮದ ಪ್ರೇರಕರಾಗಿದ್ದು, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕೆಲಸ, ಯಾರೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆರಂಭಿಸಿದ್ದು, ಇದನ್ನು ಒಕ್ಕೂಟಗಳ ವತಿಯಿಂದ ನ್ಯಾಮತಿಯಲ್ಲಿ ಮುಂದುವರೆಸಿರುವುದು ಹಾಗೂ ಅದನ್ನು ಜನರು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಂಡಿರುವುದು ಸಂತಸ ತಂದಿದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್ಎಂಎಸ್ಎಸ್ಎಸ್ ಸಂಸ್ಥೆಯ ಸಂಯೋಜಕರಾದ ಷಣ್ಮುಖ ನಾಯಕ್ ಮತ್ತು ಕಾರ್ಯಕರ್ತರಾದ ಲಿಲ್ಲಿ ಲೊಫೇಸ್, ರಾಧ, ಜಯಶೀಲ, ಗಾಯತ್ರಿ, ನ್ಯಾಮತಿ ಮತ್ತು ಗಂಜೀನಹಳ್ಳಿ ಒಕ್ಕೂಟಗಳ ಪ್ರತಿನಿಧಿಗಳು, ಪದಾಧಿಕಾರಿಗಳು ಮತ್ತು ಸಂಘಗಳ ಸ್ವಯಂ ಸೇವಕರು ಹಾಜರಿದ್ದರು.