ನಗರದ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ (ರಿ) ಪ್ರೇರಣೆಯಲ್ಲಿ ದಿನಾಂಕ: 17-02-2025 ರಂದು ಸ್ತ್ರೀ ಬಂಧು ಒಕ್ಕೂಟ, ಕಾನ್ಲೆಯವರು ರಾಯಲ್ ಪ್ರಾಥಮಿಕ ಶಾಲೆ ತಾಳಗೊಪ್ಪದಲ್ಲಿ ಆರೋಗ್ಯ ಅರಿವು ಮತ್ತು ಜಾಥಾ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆಯಿಂದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ, ಕುಮಾರಿ ಲೀನಾ ರವರು ಆರೋಗ್ಯ ಜಾಗೃತಿಯ ಬಗ್ಗೆ ಮಾಹಿತಿಯನ್ನು ನೀಡಿ, ಕ್ಯಾನ್ಸರ್ ಎನ್ನುವ ಪದ, ನಮ್ಮನ್ನು ಬೆಚ್ಚಿಬೀಳಿಸುವಂತೆ ಮಾಡುತ್ತಿದೆ. ಯಾಕೆಂದರೆ ಈ ಕಾಯಿಲೆ ಕಾಣಿಸಿಕೊಂಡ ಮೇಲೆ, ಸಾವು ಖಚಿತ ಎನ್ನುವ ಆಲೋಚನೆ ನಮ್ಮ ಮನದಲ್ಲಿ ಬಂದು ಹೋಗುತ್ತದೆ. ಆದರೆ ಈ ಕಾಯಿಲೆಯ ಲಕ್ಷಣಗಳನ್ನು ಮೊದಲೆ ತಿಳಿದುಕೊಂಡರೆ, ಈ ಕಾಯಿಲೆಯಿಂದ ಪಾರಾಗಬಹುದು. ನಮ್ಮ ಆರೋಗ್ಯದಲ್ಲಿ ಸಣ್ಣದಾಗಿ ಸಮಸ್ಯೆಗಳು ಬಂದರೂ ಕೂಡ, ನಿಧಾನವಾಗಿ ನಮಗೆ ಒಂದೊಂದೆ ಸೂಚನೆಗಳು, ರೋಗ ಲಕ್ಷಣಗಳ ಮೂಲಕ ಕಂಡು ಬರಲು ಶುರುವಾಗುತ್ತದೆ. ಅದೇ ರೀತಿ ರಕ್ತದೊತ್ತಡದಲ್ಲಿ ಏರುಪೇರಾದರೆ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಂಡು ಬರಲು ಒಂದು ರೀತಿಯಲ್ಲಿ ನಮ್ಮ ದೇಹದ ಒಳಭಾಗದಲ್ಲಿ ಕಂಡುಬರುವ ಬದಲಾವಣೆಗಳು ನಮಗೆ ತಿಳಿಸುತ್ತಾ ಹೋಗುತ್ತವೆ. ಎಲ್ಲಿಯಾದರೂ ಗಂಟುಗಳು ಕಂಡುಬರುವುದು, ಅದರಲ್ಲೂ ಪ್ರಮುಖವಾಗಿ ಎದೆಯ ಭಾಗದಲ್ಲಿ, ಕುತ್ತಿಗೆಯ ಜಾಗದಲ್ಲಿ, ಇಲ್ಲಾಂದ್ರೆ ತಲೆಯಲ್ಲಿ ಈ ರೀತಿಯ ಗಂಟುಗಳು ಕಂಡುಬಂದರೆ ಅದು ಕ್ಯಾನ್ಸರ್ ಗೆ ಸಂಬಂಧಪಟ್ಟ ಗಂಟುಗಳು ಆಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ವೇಳೆ ಈ ರೀತಿಯ ಗುಣಲಕ್ಷಣಗಳು, ನಿಮಗೂ ಕಂಡು ಬಂದರೆ, ಅದನ್ನು ನಿರ್ಲಕ್ಷ್ಯ ಮಾಡದೇ, ಕೂಡಲೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಹಾಗೆಯೇ ನಿರಂತರವಾಗಿ ಕೆಮ್ಮಿನ ಸಮಸ್ಯೆ ನಿಲ್ಲದೇ ಹೋದರೆ, ಕೆಮ್ಮಿದಾಗ ಕಫ, ಜೊತೆಗೆ ರಕ್ತ ಬರುತ್ತಿದ್ದರೆ, ಅದನ್ನು ಶ್ವಾಸಕೋಶದ ಕ್ಯಾನ್ಸರ್ ಎಂದು ಗುರುತಿಸಬಹುದು. ಇಂತಹ ಕ್ಯಾನ್ಸರ್ ಸಾಮಾನ್ಯವಾಗಿ ಧೂಮಪಾನ, ಮಧ್ಯಪಾನ ಮಾಡುವ ಜನರಿಗೆ ಈ ರೀತಿಯ ಕ್ಯಾನ್ಸರ್ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಕೂಲಂಕುಷವಾಗಿ ವಿವರಿಸಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಆಯಿಷಾರವರು ಮಾಡಿದರು. ಶ್ರೀಮತಿ ಅಶ್ವಿನಿರವರು ಸರ್ವರನ್ನು ಸ್ವಾಗತಿಸಿ, ವಂದನಾರ್ಪಣೆಯನ್ನು ಶ್ರೀಮತಿ ನಾಗರತ್ನ ರವರು ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಾಲೆ ಮುಖ್ಯೋಪಾಧ್ಯಯರಾದ ಶ್ರೀಮತಿ ಪದ್ಮಾ ರವರು, ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಅಂಬಕ್ಕ, SMSSS ಸಂಸ್ಥೆಯ ಸಂಯೋಜಕರಾದ ಶ್ರೀಮತಿ ಪ್ರಮೀಳ, ಕಾರ್ಯಕರ್ತರಾದ ಶ್ರೀಮತಿ ಮಾರ್ತ ಮತ್ತು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.
ಸ್ತ್ರೀ ಬಂಧು ಒಕ್ಕೂಟ ಹಸೂಡಿ ಫಾರಂನಲ್ಲಿ ದಿನಾಂಕ: 15-02-2025 ರಂದು ಆರೋಗ್ಯ ಅರಿವು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಪ್ರತಿನಿಧಿಗಳು ಹಾಗೂ ಸಂಘದ ಸದಸ್ಯರು ಸೇರಿದಂತೆ ಒಟ್ಟು 52 ಸದ್ಯಸರು ಭಾಗವಹಿಸಿದ್ದರು. FPAI ಸಂಸ್ಥೆಯಿಂದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀಮತಿ ಸಂತು ಬಾಯಿ ರವರು ರಕ್ತ ಹೀನತೆಯ ಬಗ್ಗೆ ಸದಸ್ಯರಿಗೆ ಮಾಹಿತಿಯನ್ನು ನೀಡಿದರು. ಇಂದಿನ ಕಾಲದಲ್ಲಿ ಪ್ರಪಂಚದಾದ್ಯಂತ ಅನೇಕ ಜನರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ರಕ್ತಹೀನತೆಗೆ ಪ್ರಮುಖ ಕಾರಣ ಹಿಮೋಗ್ಲೋಬಿನ್ನ ಅಂಶ ಕಡಿಮೆ ಆಗುವುದು. ರಕ್ತ ಹೀನತೆಯನ್ನು ಕಂಡು ಹಿಡಿಯ ಬಹುದಾದ ಲಕ್ಷಣಗಳು, ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ೧೨ ಮಿಲಿಗ್ರಾಂಗಿಂತ ಕಡಿಮೆ ಇದ್ದರೆ ಅಗ ರಕ್ತಹೀನತೆ ಕಂಡುಬರುತ್ತದೆ. ರಕ್ತಹೀನತೆಯಿಂದ ಹೆಚ್ಚು ದಣಿವಾಗುತ್ತದೆ ಮತ್ತು ಜನರು ದುರ್ಬಲರಾಗುತ್ತಾರೆ. ರಕ್ತ ಹೀನತೆಯನ್ನು ತಡೆಗಟ್ಟುವ ಸರಿಯಾದ ಆಹಾರ ಕ್ರಮಗಳು, ಸಾಮಾನ್ಯ ಸಂದರ್ಭಗಳಲ್ಲಿ ನಿಯಮಿತವಾಗಿ ಪೌಷ್ಠಿಕಾಂಶಯುಕ್ತ ಆಹಾರಗಳನ್ನು ಸೇವಿಸುವ ಮೂಲಕ ರಕ್ತ ಹೀನತೆಯಿಂದ ಪಾರಾಗಬಹುದು. ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಪೌಷ್ಠಿಕ ಆಹಾರ ಅತ್ಯಗತ್ಯವೆಂದು ತಿಳಿಸುವುದರ ಮೂಲಕ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಾಯಿ ಸಂಸ್ಥೆಯ ಶ್ರೀಯುತ ಅರವಿಂದ್, ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸಂಗೀತಾ, SMSSS ಸಂಸ್ಥೆಯ ಸಂಯೋಜಕರಾದ ಶ್ರೀಮತಿ ಪ್ರಮೀಳ, ಕಾರ್ಯಕರ್ತರಾದ ಶ್ರೀಮತಿ ಸ್ಟೆಲ್ಲಾಮೇರಿ ಉಪಸ್ಥಿತರಿದ್ದರು.
ದಿನಾಂಕ: 20-02-2025 ರಂದು ಕಾರೇಹಳ್ಳಿಯ ಸ್ತ್ರೀಬಂಧು ಒಕ್ಕೂಟದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಮತ್ತು ಸಂಘದ ಸದಸ್ಯರಿಗೆ ಆರೋಗ್ಯದ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. SಒSSS ಸಂಸ್ಥೆಯ ಸಂಯೋಜಕರಾದ ಶ್ರೀಮತಿ ಪ್ರಮೀಳಾರವರು ಕಾರ್ಯಕ್ರಮವನ್ನು ಉದ್ಘಾಟಿಸಿ, SಒSSS ಸಂಸ್ಥೆಯ ಪರಿಚಯ ಮತ್ತು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಆರೋಗ್ಯ ಇಲಾಖೆ ಅಧಿಕಾರಿಗಳಾದ ಶ್ರೀಯುತ ಶಶಿಕುಮಾರ್ ರವರು ಮಾತನಾಡಿ ಡೆಂಗ್ಯೂ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಡೆಂಗ್ಯೂ ಒಂದು ಸಾಂಕ್ರಾಮಿಕ ರೋಗವಾಗಿದ್ದು ಸೊಳ್ಳೆಗಳಿಂದ ಬರುತ್ತದೆ ಮತ್ತು ಒಬ್ಬರಿಂದ ಒಬ್ಬರಿಗೆ ಸೊಳ್ಳೆಗಳ ಮೂಲಕವೇ ಹರಡುತ್ತದೆ. ಮಲೇರಿಯಾದಂತೆ ಸೊಳ್ಳೆಗಳಿಂದ ಹರಡುವ ಮತ್ತು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಮಾರಕವಾಗಿರುವ ಡೆಂಗ್ಯೂಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ, ಆದರೆ ಡೆಂಗ್ಯೂ ಜ್ವರ ತಡೆಗಟ್ಟಲು ಮೊತ್ತಮೊದಲು ಸೊಳ್ಳೆಗಳನ್ನು ನಿಯಂತ್ರಿಸಬೇಕು. ಸೊಳ್ಳೆಗಳನ್ನು ತಡೆಯಲು ಕಿಟಕಿ ಮತ್ತು ಬಾಗಿಲುಗಳಿಗೆ ಮೆಶ್ ಹಾಕಿಸುವುದು ಅಥವಾ ಸೊಳ್ಳೆ ನಾಶಕ ಔಷಧಗಳನ್ನು ಬಳಸುವುದು ಸೂಕ್ತ. ಸೊಳ್ಳೆ ಪರದೆ ಹಾಕಿಕೊಂಡು ಮಲಗುವುದು ಒಳ್ಳೆಯದು. ನಗರಗಳಲ್ಲಿ ಸೊಳ್ಳೆ ನಿವಾರಕಗಳನ್ನು ಬಳಸಿ ಸೊಳ್ಳೆ ಕಡಿತದಿಂದ ರಕ್ಷಣೆ ಮಾಡಿಕೊಳ್ಳುವುದು ಮಹತ್ವದ ವಿಷಯಗಳಾಗಿವೆ ಎಂದು ಅವರು ತಿಳಿಸಿದರು.
ನಂತರ ಆರೋಗ್ಯ ಇಲಾಖೆಯ ಸಿಬ್ಬಂದಿಯಾದ ಶ್ರೀಮತಿ ನ್ಯಾನ್ಸಿ ರವರು ಮಾತನಾಡಿ ಪೌಷ್ಟಿಕ ಆಹಾರವನ್ನು ಬಳಕೆ ಮಾಡುವುದು, ಹೆಣ್ಣು ಮಕ್ಕಳು ಸಮಾಜದಲ್ಲಿ ಯಾವ ರೀತಿ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಬೇಕು ಹಾಗೂ ಮುಟ್ಟಿನ ಸಮಯದಲ್ಲಿ ಅವರು ಹೇಗೆ ಜಾಗೃತರಾಗಿರಬೇಕೆಂದು ತಿಳಿಸಿದರು. ಹಾಗೆಯೇ ಮತ್ತೋರ್ವ ಆರೋಗ್ಯ ಇಲಾಖೆಯ ಸಿಬ್ಬಂದಿಯಾದ ಶ್ರೀಮತಿ ಪವಿತ್ರ ರವರು ಹೆಚ್ಐವಿ ಸೋಂಕಿನ ಬಗ್ಗೆ ಮಾತನಾಡಿ, ಹೆಚ್ಐವಿ ಪರೀಕ್ಷೆ ಮಾಡಿಸಿಕೊಳ್ಳುವುದು ಮುಜುಗರ ಹಾಗೂ ಕಠಿಣ. ಆದಾಗ್ಯೂ ಇಂದಿನ ದಿನಗಳಲ್ಲಿ ಅದನ್ನು ಪರೀಕ್ಷಿಸಲು ಹಲವಾರು ವಿಧಾನಗಳಿವೆ. ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಇಂದು ಹೆಚ್ಐವಿ ಪತ್ತೆಗೆ ಸೂಕ್ತ ಸೌಲಭ್ಯಗಳಿವೆ ಮತ್ತು ಅವುಗಳು ರೋಗಿಗಳ ರಹಸ್ಯ ಕಾಪಾಡುತ್ತದೆ. ಸೋಂಕು ಮುಂದುವರಿದು ಏಡ್ಸ್ ತೀವ್ರತೆ ಪಡೆಯುವ ಮೊದಲು ಇದಕ್ಕೆ ಆರಂಭಿಕ ಚಿಕಿತ್ಸೆ ಅನಿವಾರ್ಯ ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ಸುರೇಶ್ ರವರು ಮಾತನಾಡಿ ಮಕ್ಕಳು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಪ್ರತಿನಿಧಿಗಳು, ಸಂಘದ ಸದಸ್ಯರು, ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 71 ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ನಿರ್ಮಲಾ ರವರು ನಡೆಸಿಕೊಟ್ಟರು. ಶ್ರೀಮತಿ ಝಾನ್ಸಿ ರವರು ಸರ್ವರಿಗೂ ಸ್ವಾಗತಿಸಿದರು. ಶ್ರೀಮತಿ ಜಾಸ್ಮಿನ್ ರವರು ವಂದಿಸಿದರು. ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಮೇರಿ, SMSSS ಸಂಸ್ಥೆಯ ಕಾರ್ಯಕರ್ತರಾದ ಶ್ರೀಮತಿ ಪರಿಮಳರವರು ಕೂಡ ಉಪಸ್ಥಿತರಿದ್ದರು.
ಸ್ತ್ರೀಬಂಧು ಒಕ್ಕೂಟ ಶಿವಮೊಗ್ಗ ವತಿಯಿಂದ ದಿನಾಂಕ: 18-02-2025 ರಂದು ಕ್ಯಾನ್ಸರ್ ಅರಿವು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಒಕ್ಕೂಟದ 27 ಪ್ರತಿನಿಧಿಗಳು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಆರೋಗ್ಯ ಇಲಾಖೆಯ ಡಾ.ಹರ್ಷವರ್ಧನ್ ರವರು ಮಾತನಾಡಿ ಕ್ಯಾನ್ಸರ್ ಗುಣಲಕ್ಷಣಗಳ ಬಗ್ಗೆ ತಿಳಿಸಿ, ಕ್ಯಾನ್ಸರ್ ಎಂಬ ಪದವು ದೇಹದ ಯಾವುದೇ ರೋಗವನ್ನು ವಿವರಿಸುವ ಸಾಮಾನ್ಯ ಪದವಾಗಿದೆ, ಇದು ಅಸಹಜ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯ ಪರಿಣಾಮವಾಗಿ ದೇಹದ ಪ್ರತಿಯೊಂದು ಭಾಗದಲ್ಲೂ ಅಂತಿಮವಾಗಿ ಹರಡುತ್ತದೆ. 100 ಕ್ಕೂ ಹೆಚ್ಚು ವಿವಿಧ ರೀತಿಯ ಕ್ಯಾನ್ಸರ್ ಗಳಿದ್ದು, ಪ್ರತಿಯೊಂದೂ ವಿಭಿನ್ನ ಅಂಗ ಅಥವಾ ಅಂಗಾಂಶದಲ್ಲಿ ಹುಟ್ಟಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್, ಗರ್ಭಕೋಶ ಮತ್ತು ಗರ್ಭ ಕಂಠ, ಅನ್ನ ನಾಳದ ಕ್ಯಾನ್ಸರ್ ಗಳು ಹೆಚ್ಚಾಗಿ ಕಂಡು ಬರುತ್ತಿವೆ. ಕಾಲ ಕಾಲಕ್ಕೆ ವೈದ್ಯರು ಹೇಳಿದಾಗ ತಪಾಸಣೆ ಮಾಡಿಸುವುದು ಉತ್ತಮ. ಹಾಗೆಯೇ ಉತ್ತಮ ಜೀವನ ಶೈಲಿ, ಮಾತ್ರೆ ಮತ್ತು ಔಷಧಿಗಳ ಬಳಕೆ, ಸೂಕ್ತ ಸಮಯದಲ್ಲಿ ಆರೋಗ್ಯ ತಪಾಸಣೆ ಮಾಡಿಸುವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಫಿಲೋಮಿನಾ ರವರು ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ಆಸಿನ ಬಿ ರವರು ಸರ್ವರಿಗೂ ವಂದನೆಗಳನ್ನು ಸಲ್ಲಿಸಿದರು. ಒಕ್ಕೂಟದ ಉಪಾಧ್ಯಕ್ಷರಾದ ಶ್ರೀಮತಿ ಮಮತಾ ರವರು, SMSSS ಸಂಸ್ಥೆಯ ಸಂಯೋಜಕರಾದ ಶ್ರೀಮತಿ ಪ್ರಮೀಳ, ಕಾರ್ಯಕರ್ತರಾದ ಶ್ರೀಮತಿ ಜ್ಯೋತಿವಾಸ್ ರವರು ಹಾಜರಿದ್ದರು.
ಜನರಲ್ಲಿ ಕ್ಯಾನ್ಸರ್ ಜಾಗೃತಿ ಮೂಢಿಸುವ ಉದ್ಧೇಶದಿಂದ ಶಿವಮೊಗ್ಗ ನಗರದ ಸ್ತ್ರೀಬಂಧು ಒಕ್ಕೂಟ, ರಾಗಿಗುಡ್ಡ ಇಲ್ಲಿ ದಿನಾಂಕ:19-02-2025 ರಂದು ಕ್ಯಾನ್ಸರ್ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ, ಆರೋಗ್ಯ ಇಲಾಖೆಯ ಡಾ. ಹರ್ಷವರ್ಧನ್ (MBBS, MD)ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಕ್ಯಾನ್ಸರ್ ಕಾಯಿಲೆಗಳಲ್ಲಿ ಸ್ತನ ಕ್ಯಾನ್ಸರ್ ನಿಂದ ಬಳಲುವವರ ಸಂಖ್ಯೆ ಅಧಿಕವಾಗಿದ್ದು, ಈ ಕಾಯಿಲೆಯ ರೋಗ ಲಕ್ಷಣಗಳ ಬಗ್ಗೆ ವಿವರಿಸಿ ಇದರ ಬಗ್ಗೆ ಹೆಚ್ಚಿನ ಗಮನಹರಿಸಲು ಸಲಹೆ ನೀಡಿದರು. ಆರು ತಿಂಗಳಿಗೊಮ್ಮ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಉತ್ತಮವೆಂದು ತಿಳಿಸಿದರು.
ನಮ್ಮ ದೇಶದಲ್ಲಿ ಗರ್ಭಕೋಶದ ಕ್ಯಾನ್ಸರ್ ಬಲು ವೇಗವಾಗಿ ಎಲ್ಲೆಡೆ ಹರಡಿಕೊಳ್ಳುತ್ತಿದೆ. ವಿಶ್ವ ಮಟ್ಟದಲ್ಲಿ ನೋಡಿದಾಗ ಭಾರತ ಈ ನಿಟ್ಟಿನಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತೀಯ ಮಹಿಳೆಯರು ಈ ಕುರಿತಾಗಿ ಸಾಕಷ್ಟು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಇದು ವೇಗವಾಗಿ ಹರಡುತ್ತಿದೆ. 30-45 ವರ್ಷದೊಳಗಿನ ಹೆಂಗಸರು ಈ ಅಪಾಯಕಾರಿ ರೋಗಕ್ಕೆ ಬೇಗ ಬಲಿಯಾಗುತ್ತಾರೆ. ಆದ್ದರಿಂದ ಈ ವಯಸ್ಸಿನ ಹೆಂಗಸರು ಬೇಜವಾಬ್ದಾರಿ ಬಿಟ್ಟು, ಆದಷ್ಟು ಬೇಗ ಚಿಕಿತ್ಸೆ ಪಡೆಯಬೇಕು. ಹೆಂಗಸರು ಪ್ರತಿ 3 ವರ್ಷಕ್ಕೆ ಈ ಕುರಿತಾಗಿ ಗೈನಕಾಲಜಿಸ್ಟ್ರ ಬಳಿ ಹೋಗಿ ತಪಾಸಣೆ ಮಾಡಿಸಿದರೆ, ಈ ಕಾಯಿಲೆಯಿಂದ ತಪ್ಪಿಸಿಕೊಳ್ಳಬಹುದು. ಗರ್ಭಕೋಶದ ಕ್ಯಾನ್ಸರ್ ಬಗ್ಗೆ ಗಮನಹರಿಸಲು ಪ್ರತಿ 3 ವರ್ಷಗಳಿಗೊಮ್ಮೆ ಪ್ಯಾಪ್ಸ್ಮಿಯರ್ ಟೆಸ್ಟ್ ಹಾಗೂ ಸ್ತನ ಕ್ಯಾನ್ಸರ್ ಗೆ ಪ್ರತಿ ವರ್ಷ ಮೆಮೋಗ್ರಫಿ ಮಾಡಿಸಬೇಕು. ಆರಂಭದಲ್ಲೇ ಇವು ಗುರುತಿಸಲ್ಪಟ್ಟರೆ ಬೇಗ ಗುಣಪಡಿಸಬಹುದು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀಮತಿ ನಾಗರತ್ನ ರವರು ಎಲ್ಲರನ್ನು ಸ್ವಾಗತಿಸಿ, ಶ್ರೀಮತಿ ಶೋಭಾ ರವರು ವಂದನೆಗಳನ್ನು ಸಲ್ಲಿಸಿದರು. ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಮಮತಾ, SಒSSS ಸಂಸ್ಥೆಯ ಸಂಯೋಜಕರಾದ ಶ್ರೀಮತಿ ಪ್ರಮೀಳ, SMSSS ಸಂಸ್ಥೆಯ ಕಾರ್ಯಕರ್ತರಾದ ಶ್ರೀಮತಿ ಮಾಲಿನಿ ಉಪಸ್ಥಿತರಿದ್ದರು.
ದಿನಾಂಕ: 20-02-2025 ರಂದು ಸ್ತ್ರೀ ಬಂಧು ಒಕ್ಕೂಟ ಗಾಂಧಿನಗರ, ಭದ್ರಾವತಿ ಇವರ ವತಿಯಿಂದ ಆರೋಗ್ಯದ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಶ್ರೀಮತಿ ಸುಶೀಲಮ್ಮ, ತಾಲ್ಲೂಕು ಆರೋಗ್ಯ ಶಿಕ್ಷಣ ಅಧಿಕಾರಿ, ಆರೋಗ್ಯ ಇಲಾಖೆ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಟುಂಬದಲ್ಲಿ ಮಹಿಳೆಯರ ಪಾತ್ರ ಹಾಗೂ ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ರಕ್ತ ಹೀನತೆಗೆ ಕಾರಣಗಳು ಮತ್ತು ಪೌಷ್ಟಿಕ ಆಹಾರಗಳಾದ ಸೊಪ್ಪು, ನಾರಿನ ಅಂಶ ಇರುವ ತರಕಾರಿ, ಹಣ್ಣು, ಮೊಟ್ಟೆ, ಹಸಿರು ತರಕಾರಿಗಳ ಸೇವನೆ, ಎಣ್ಣೆ ಮತ್ತು ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಕಡಿಮೆ ಬಳಸುವುದು, ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯುವುದು ಮುಂತಾದ ಆರೋಗ್ಯ ಸಂಬಂಧಿ ಅಂಶಗಳನ್ನು ತಿಳಿಸಿದರು. ಮಕ್ಕಳಿಗೆ ಅಂಕ ಪಡೆಯಲು ಒತ್ತು ನೀಡುವ ಪೋಷಕರು ಅವರಿಗೆ ಜೀವನ ನಡೆಸಲು ಪೂರಕವಾದ ಆರೋಗ್ಯ, ಜೀವನ ಶೈಲಿ ಬಗ್ಗೆ ಮಾಹಿತಿ ನೀಡಬೇಕು ಎಂದು ಉತ್ತಮವಾಗಿ ಸದಸ್ಯರಿಗೆ ಮನಮುಟ್ಟುವಂತೆ ಅರಿವು ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀಮತಿ ತೆರೆಸಾ ಕೌಶಲ್ಯ ರವರು ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ನೇತ್ರಾವತಿ ರವರು ಎಲ್ಲರಿಗೂ ವಂದಿಸಿದರು. ಒಕ್ಕೂಟದ 16 ಪ್ರತಿನಿಧಿಗಳು ಮತ್ತು ಸಂಘದ 10 ಸದಸ್ಯರು ಸೇರಿದಂತೆ ಒಟ್ಟು 26 ಸದಸ್ಯರು ಭಾಗವಹಿಸಿದ್ದರು ಹಾಗೂ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವಿಕ್ಟೋರಿಯಾರವರು, SMSSS ಸಂಸ್ಥೆಯ ಸಂಯೋಜಕರಾದ ಶ್ರೀಮತಿ ಪ್ರಮೀಳರವರು, ಕಾರ್ಯಕರ್ತರಾದ ಶ್ರೀಮತಿ ಪ್ರಮೀಳಾಮೇರಿ, ಪರಿಮಳ ರವರು ಭಾಗವಹಿಸಿದ್ದರು.
ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿಯ ಸ್ತ್ರೀಬಂಧು ಶರಾವತಿ ಒಕ್ಕೂಟದವರು ದಿನಾಂಕ: 21-02-2025ರಂದು ಕ್ಯಾನ್ಸರ್ ಅರಿವು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಸರ್ಕಾರಿ ಆರೋಗ್ಯ ಇಲಾಖೆಯ ಡಾ. ಹರ್ಷವರ್ಧನ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಕ್ಯಾನ್ಸರ್ ಕಾಯಿಲೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಕ್ಯಾನ್ಸರ್ ಗುಣಲಕ್ಷಣಗಳ ಬಗ್ಗೆ ಹಾಗೂ ಪ್ರಾಥಮಿಕ ಚಿಕಿತ್ಸೆಯ ಅರಿವು ಪ್ರತಿಯೊಬ್ಬರಿಗೂ ಅಗತ್ಯ ವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮನೋರೋಗ ತಜ್ಞರಾದ ಡಾ. ಪ್ರದೀಪ್ ರವರು ಮಾತನಾಡಿ, ಮಾನಸಿಕ ಒತ್ತಡ, ಮಾನಸಿಕ ರೋಗ ಹಾಗೂ ಅದನ್ನು ನಿವಾರಿಸುವುದರ ಬಗ್ಗೆ ಮತ್ತು ಪ್ರತಿದಿನದ ವ್ಯಾಯಾಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಪಾರ್ಶ‍್ವ ವಾಯು ತಜ್ಞರಾದ ಡಾ. ಪ್ರವೀಣ್ ರವರು ಮಾತನಾಡಿ, ಮೆದುಳಿನ ಗಡ್ಡೆ, ಮೆದುಳಿನಲ್ಲಿ ಸೋಂಕು ಮುಂತಾದ ಸಮಸೈಗಳಿಗೆ ಕಾರಣವಾದ ಅಪಸ್ಮಾರ (ಮೂರ್ಛೆರೋಗ) ಕಾಯಿಲೆಯ ಗುಣಲಕ್ಷಣಗಳ ಬಗ್ಗೆ, ಕೆಲವು ಅನುವಂಶೀಯ ಅಸ್ವಸ್ಥತೆಗಳ ಬಗ್ಗೆ, ಆರೋಗ್ಯ ಇಲಾಖೆಯಲ್ಲಿ ಚಿಕಿತ್ಸೆಗಳನ್ನು ಪಡೆಯುವುದು, ಫಿಜಿಯೋಥೆರಪಿಗಳನ್ನು ಮಾಡಿಸುವುದರ ಬಗೆಗಿನ ಮಾಹಿತಿಗಳನ್ನು ನೀಡಿದರು.
ಮತ್ತೋರ್ವ ಪಾರ್ಶ‍್ವ ವಾಯು ತಜ್ಞರಾದ ಮರಿಯರ್ಜೋಸ್ಪಿನ್ ರವರು, ಪ್ಯಾರಲಿಸಿಸ್ ಆದವರು ಯಾವ ತೆರಪಿಯನ್ನು ಪಡೆಯಬೇಕು ಹಾಗೂ ಚಿಕಿತ್ಸೆಗಳನ್ನು ಎಷ್ಟು ಕಾಲ ಪಡೆಯಬೇಕು, ಚಿಕಿತ್ಸೆ ಪೂರ್ಣಗೊಳಿಸದಿದ್ದರೆ, ಪುನಃ ಮೂರು ವರ್ಷಗಳವರೆಗೆ ಚಿಕಿತ್ಸೆಯನ್ನು ಮುಂದುವರೆಸ ಬೇಕಾಗುವುದು ಹಾಗೂ ಬೆನ್ನು ನೋವು, ಕಾಲಿನ ಗಂಟು ನೋವು, ಕುತ್ತಿಗೆ ನೋವು ಗಳನ್ನು ಮನೆಯಲ್ಲಿಯೇ ಯೋಗಾಸನದ ಮೂಲಕ ಹೇಗೆ ನಾವು ಪರಿಹರಿಸಿಕೊಳ್ಳಬಹುದು ಎಂಬುದನ್ನು ಸದಸ್ಯರಿಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಶ್ರೀಮತಿ ಕಾವ್ಯರವರು ಸ್ವಾಗತಿಸಿದರು. ಶ್ರೀಮತಿ ರತ್ನರವರು ಸರ್ವರನ್ನು ವಂದಿಸಿದರು. ಒಕ್ಕೂಟದ ಅಧ್ಯಕ್ಷರು ಶ್ರೀಮತಿ ಆಗ್ನೆಸ್ ಡಿಸೋಜಾ, ಸಂಸ್ಥೆಯ ಸಂಯೋಜಕರಾದ ಪ್ರಮೀಳ, ಶ್ರೀಮತಿ ಪ್ರೆಸಿಲ್ಲಾ ಮತ್ತು ಕಾರ್ಯಕರ್ತರಾದ ಜ್ಯೋತಿವಾಸ್ ರವರು ಉಪಸ್ಥಿತರಿದ್ದರು.